ಬೆಂಗಳೂರು : ನಾಳೆ ಬೆಂಗಳೂರು ಬಂದ್ ಹಿನ್ನೆಲೆ - ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮೀಟಿಂಗ್

ಬೆಂಗಳೂರು : ನಾಳೆ ಬೆಂಗಳೂರು ಬಂದ್ ಹಿನ್ನೆಲೆ - ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮೀಟಿಂಗ್

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಕ್ರಮಗಳ ವಿಚಾರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಆಧಿಕಾರಿಗಳು ಸಭೆ ನಡೆಸಲಿದ್ದಾರೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಹೆಚ್ಚುವರಿ ಆಯುಕ್ತರು, ಡಿಸಿಪಿಗಳು ಭಾಗಿಯಾಗಲಿದ್ದಾರೆ. 

ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಅಲ್ಲದೇ 2016ರಲ್ಲಿ ಕಾವೇರಿ ನೀರಿಗಾಗಿ ಗಲಾಟೆ ನಡೆದ ಸ್ಥಳಗಳು, ನಗರದ ಪಶ್ಚಿಮ ಹಾಗೂ ಉತ್ತರ ವಿಭಾಗಗಳಲ್ಲಿ ತೀವ್ರ ನಿಗಾವಹಿಸಲು ಸೂಚಿಸಲಾಗಿದೆ. ಇದರೊಂದಿಗೆ ತಮಿಳುನಾಡಿನಿಂದ ಬಸ್ ಸಂಚರಿಸುವ ಮಾರ್ಗಗಳು, ಬಸ್ ನಿಲ್ದಾಣಗಳು, ತಮಿಳು ಭಾಷಿಕರು ವಾಸಿಸುವ ಕಡೆ ಹೆಚ್ಚಿನ ನಿಗಾ ವಹಿಸಲು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. 

ಮೈಸೂರು ರಸ್ತೆ, ಹೊಸೂರು ರಸ್ತೆ, ಆರ್.ಆರ್ ನಗರ, ಬ್ಯಾಟರಾಯನಪುರ, ಸಿಟಿ ಮಾರ್ಕೆಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ, ಧರಣಿ, ಹೋರಾಟಗಳ ಬಗ್ಗೆ ಮೊದಲೇ ಮಾಹಿತಿ ಪಡೆದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಆಯಾ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಬೇಕು ಎಂದು ಸೂಚಿಸಲಾಗಿದ್ದು, ಮತ್ತಷ್ಟು ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ.