ಬೆಂಗಳೂರು: ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗೆ ಚಕಾರ ಎತ್ತದ ಸಿಎಂ, ಗೌರವಧನದಲ್ಲಿ ಮತ್ತಷ್ಟು ಹೆಚ್ಚಳ

ಬೆಂಗಳೂರು: ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗೆ ಚಕಾರ ಎತ್ತದ ಸಿಎಂ, ಗೌರವಧನದಲ್ಲಿ ಮತ್ತಷ್ಟು ಹೆಚ್ಚಳ

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು, ಅತಿಥಿ ಉಪನ್ಯಾಸಕರ ಮುಖ್ಯ ಬೇಡಿಕೆಯಾದ ಸೇವಾ ಖಾಯಮಾತಿ ಬಗ್ಗೆ ಚಕಾರವೆತ್ತಿಲ್ಲವೆಂದು ಸಿಎಂ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. 

ಇಂದು ಗೃಹಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಮತ್ತು‌ ವಿಧಾನಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ ಎಂದರು. 

ಅತಿಥಿ ಉಪನ್ಯಾಸಕರ ಮುಖ್ಯ ಬೇಡಿಕೆಯಾದ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ನಾನು ದನಿ ಎತ್ತುವ ಮೂಲಕ ಇವರ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದೆನು ಅಂತಾ ಸಿಎಂ ಸ್ಮರಿಸಿಕೊಂಡರು. 

ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ, 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಂ.ಎಸ್. ಶ್ರೀಕರ್‌, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್‌ ಮತ್ತು ಇತರ ಹಿರಿಯ ಅಧಿಕಾರಿಗಳು, ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.