ಧಾರವಾಡ: ಕವಲಗೇರಿಗೆ ಚಿರತೆ ಕಮ್ ಬ್ಯಾಕ್- ಇಬ್ಬರ ಮೇಲೆ ದಾಳಿ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮಕ್ಕೆ ಮತ್ತೆ ಚಿರತೆಯೊಂದು ಬಂದಿದ್ದು, ಇಬ್ಬರ ಮೇಲೆ ದಾಳಿ ಮಾಡಿದೆ. ಕಡಲೆ ಕೀಳಲೆಂದು ಇಂದು ನಸುಕಿನಜಾವ ಹೊಲಕ್ಕೆ ಹೊರಟಿದ್ದ ಮಂಜುಳಾ ತೋಟಗೇರ ಹಾಗೂ ಬಸವಣ್ಣೆವ್ವ ಎಂಬುವರ ಮೇಲೆ ಚಿರತೆ ದಾಳಿ ಮಾಡಿದೆ. ಇತ್ತೀಚೆಗೆ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆಯೊಂದು ಅಡಗಿ ಕುಳಿತಿತ್ತು. ಆಗ ಅರಣ್ಯ ಇಲಾಖೆ ಅದನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟು ಬಂದಿತ್ತು. ಇದೀಗ ಅದೇ ಗ್ರಾಮದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಡಲೆ ಕೀಳಲೆಂದು ಹೊರಟಿದ್ದ ಮಹಿಳೆಯರ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಇಬ್ಬರೂ ಮಹಿಳೆಯರು ಗಾಯಗೊಂಡಿದ್ದು, ಸದ್ಯ ಅವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ಚಿರತೆ ದಾಳಿ ಮಾಡಿದ್ದರಿಂದ ಉಳಿದವರೆಲ್ಲರೂ ಚೀರಾಡಿದ್ದರಿಂದ ಚಿರತೆ ಅಷ್ಟಕ್ಕೇ ಬಿಟ್ಟು ಓಡಿ ಹೋಗಿದೆ.