ಬೆಂಗಳೂರು : ಮಾರ್ಚ್ 15ರೊಳಗೆ ನೀರಿನ ಟ್ಯಾಂಕರ್ ಕಡ್ಡಾಯ ನೋಂದಣಿ ಮಾಡಿಸಿಕೊಳ್ಳಿ - ಇಲ್ಲವೆ ಕಾನೂನು ಕ್ರಮ ಎದುರಿಸಿ

ಬೆಂಗಳೂರು : ಇದೇ ತಿಂಗಳು ಮಾರ್ಚ್ 15ರೊಳಗೆ ಬೆಂಗಳೂರಿನಲ್ಲಿ ನೀರು ಪೂರೈಕೆ ಮಾಡುತ್ತಿರುವ ಖಾಸಗಿ ಟ್ಯಾಂಕರ್ ಗಳು ಬಿಬಿಎಂಪಿ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಇದೇ ತಿಂಗಳ 15 ಕೊನೆಯ ದಿನವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ 1530 ಖಾಸಗಿ ಟ್ಯಾಂಕರ್ ಗಳು ಇಲ್ಲಿಯವರೆಗೆ ನೋಂದಣಿ ಮಾಡಿಕೊಂಡಿದ್ದು, ಇನ್ನುಳಿದ ಸಹಸ್ರ ಸಂಖ್ಯೆಯ ಟ್ಯಾಂಕರ್ ಗಳು ನೋಂದಣಿ ಮಾಡಿಸದೇ ನೀರು ಪೂರೈಸುತ್ತಿರುವುದರ ಕಂಡು ಬಂದಿದ್ದು, ಈ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಲಿದೆ. ಮಾರ್ಚ್ ತಿಂಗಳ 15ರ ವರೆಗೆ ನೋಂದಣಿಗೆ ಕಾಲವಕಾಶ ನೀಡಲಾಗಿದೆ. ಒಂದು ವೇಳೆ ಅದಾದ ನಂತರವೂ ನೋಂದಣಿಯಾಗದಿದ್ದಲ್ಲಿ ಅಂಥ ಟ್ಯಾಂಕರ್ ಗಳ ಮಾಲೀಕರು ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಈಗಾಗಲೇ ನೋಂದಣಿಯಾದ 1530 ಟ್ಯಾಂಕರ್‌ಗಳಿಂದ ನಿತ್ಯ 10 ಎಂಎಲ್‍ಡಿ ನೀರನ್ನು ಒಂದೇ ಬಾರಿಗೆ ಸರಬರಾಜು ಮಾಡಬಹುದು. ನೋಂದಣಿಯಾದ ಟ್ಯಾಂಕರ್ ಗಳಿಗೆ ಸ್ಟಿಕ್ಕರ್ ಅಳವಡಿಸಲಾಗುವುದು. ಆ ಟ್ಯಾಂಕರ್ ಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿರುವ ದೂರುಗಳು ಕೇಳಿಬಂದಲ್ಲಿ ಕ್ರಮಕೈಗೊಳ್ಳಲಾಗುವುದು. 419 ಜನರು ಸ್ವಯಂಪ್ರೇರಿತವಾಗಿ ಬಾಡಿಗೆಗೆ ತಮ್ಮ ಟ್ಯಾಂಕರ್ ಗಳನ್ನು ಮಂಡಳಿಗೆ ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬೇಕಾಬಿಟ್ಟಿಯಾಗಿ ಬೊರವೆಲ್‍ಗಳನ್ನು ಕೊರೆಯುವುದರ ಬದಲು ನೀರಿನ ಲಭ್ಯತೆಯನ್ನು ಆಧರಿಸಿ ಭೂ-ವಿಜ್ಞಾನಿಗಳ ವರದಿಯ ಆಧಾರದ ಮೇಲೆ ಬೊರವೆಲ್‍ಗಳನ್ನು ಕೊರೆಯಿಸಲು ಮಂಡಳಿ ಉದ್ದೇಶಿಸಿದೆ. ಇದಕ್ಕಾಗಿ ನಾಲ್ವರು ಭೂ-ವಿಜ್ಞಾನಿಗಳನ್ನು ಸಹ ನೇಮಿಸಬೇಕಾಗಿದೆ ಎಂದರು.