ಬಾಲ ಕಾರ್ಮಿಕರು ಪತ್ತೆಯಾದ್ರೆ ಮಾಲೀಕರೊಂದಿಗೆ ಪಾಲಕರ ಮೇಲೂ ಎಫ್‌ಐಆರ್

ಬಾಲ ಕಾರ್ಮಿಕರು ಪತ್ತೆಯಾದ್ರೆ ಮಾಲೀಕರೊಂದಿಗೆ ಪಾಲಕರ ಮೇಲೂ ಎಫ್‌ಐಆರ್

ಧಾರವಾಡ : ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಬಾಲ ಕಾರ್ಮಿಕರು ಪತ್ತೆಯಾದ ಪ್ರಕರಣಗಳಲ್ಲಿ ದುಡಿಸಿಕೊಳ್ಳುವ ಮಾಲೀಕನೊಂದಿಗೆ ಪತ್ತೆಯಾದ ಮಕ್ಕಳ ಪಾಲಕರ ವಿರುದ್ಧವೂ ಪ್ರಕರಣ ದಾಖಲಿಸಿ, ಅವರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕು. ಮಾಲೀಕ ಮತ್ತು ಪಾಲಕ ಇಬ್ಬರನ್ನು ಜವಾಬ್ದಾರರನ್ನಾಗಿಗೊಳಿಸಿದಾಗ ಇದರ ಗಂಭೀರತೆ ಅರ್ಥವಾಗಿ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣವಾಗುತ್ತದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಮತ್ತು ಟಾಸ್ಕಪೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆ ಮತ್ತು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸಭೆ ಜರುಗಿಸಿ ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ದೊಡ್ಡದು. ಇಲ್ಲಿನ ಸಣ್ಣ, ಮಧ್ಯಮ ಉದ್ಯಮಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ, ದೈಹಿಕ ಬೆಳವಣಿಗೆ ಕುಂಠಿತವಾಗಿ, ಪ್ರಗತಿಯಿಂದ ಹಿಂದೆ ಉಳಿಯುತ್ತಾರೆ. ಆದ್ದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರ ಇಲಾಖೆ ಅಧಿಕಾರಿಗಳ ಸಹಕಾರ, ಸಮನ್ವಯದಲ್ಲಿ ಇಟ್ಟಂಗಿ ಬಟ್ಟಿ, ಹೋಟೆಲ್, ಬೇಕರಿ, ಖಾನಾವಳಿ ಸೇರಿದಂತೆ ಇತರ ಉದ್ಯಮ ಸ್ಥಳಗಳ ಮೇಲೆ ನಿರಂತರ ದಾಳಿ ಮಾಡಿ, ಮಕ್ಕಳನ್ನು ರಕ್ಷಸಬೇಕು ಎಂದು ಹೇಳಿದರು. 

ರೇಡ್ ಮಾಡಿದಾಗ ಸಿಗುವ ಮಕ್ಕಳಿಗೆ ಶಿಕ್ಷಣ, ವಸತಿ ನಿಲಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿರಿ. ಸರ್ಕಾರದಿಂದ ಅನುಮತಿ ಪಡೆದು ಮಕ್ಕಳ ಉತ್ತಮ ಓದಿಗೆ ಅಗತ್ಯ ಸೌಲಭ್ಯ ಕಲ್ಪಿಸೋಣ. ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಅವರ ಹಕ್ಕು ವ್ಯರ್ಥವಾಗದಂತೆ ಇಲಾಖೆಗಳು ಕೆಲಸ ಮಾಡಬೇಕು. ಪತ್ತೆ ಹಚ್ಚುವ ಪ್ರತಿ ಬಾಲಕಾರ್ಮಿಕರನ ಕುರಿತು ಒಂದು ಅಧ್ಯಯನ ಮಾಡಿ, ಬಾಲ ಕಾರ್ಮಿಕತ್ವಕ್ಕೆ ನಿಖರವಾದ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುತಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.