ಸೂರ್ಯಯಾನಕ್ಕೆ ಮುಹೂರ್ತ ಫಿಕ್ಸ್: ಸೆ.2ರಂದು ಬೆಳಗ್ಗೆ 11.50ಕ್ಕೆ Aditya L-1 ಉಡಾವಣೆ

ನವದೆಹಲಿ: ಚಂದ್ರಯಾನ-3 ಉಡಾವಣೆ ಯಶಸ್ಸಿಯಾಗುತ್ತಿದ್ದಂತೆ, ಇಸ್ರೋದಿಂದ ಮತ್ತೊಂದು ಐತಿಹಾಸಿಕ ದಾಖಲೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಸೂರ್ಯನ ಶಿಕಾರಿಗಾಗಿ ಆದಿತ್ಯ ಎಲ್1 ಉಡಾವಣೆಗೆ ಸಮಯ ನಿಗದಿ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯಾ ಎಲ್1 ಅನ್ನು ಸೆಪ್ಟೆಂಬರ್ 2ರಂದು ಬೆಳಿಗ್ಗೆ 11.50ಕ್ಕೆ ಉಡಾವಣೆಯನ್ನು ನಡೆಸಲಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದೆ. ಸೂರ್ಯನ ಸುತ್ತ ಎಷ್ಟು ಲೇಯರ್ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುವ ಗುರಿಯನ್ನು ಈ ಆದಿತ್ಯ ಎಸ್1 ಹೊಂದಿದೆ..
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯ. ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ನೆಲೆಗೊಳ್ಳಲಿದೆ.
ಉಡಾವಣೆಯ ಬಳಿಕ L1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ. ಆ ಬಳಿಕ ಸೂರ್ಯನ ಕುರಿತು ಅಭೂತಪೂರ್ವ ಒಳನೋಟಗಳನ್ನು ಒದಗಿಸುವ ಗುರಿ ಹೊಂದಿದೆ.