ಮನೆ ಮನೆಗೆ ಹೋಗಿ ಜನರ ಆರೋಗ್ಯ ತಪಾಸಣೆ ನಡೆಸುವ ಗೃಹ ಆರೋಗ್ಯ ಸೇವೆಗೆ ಚಾಲನೆ

ಮನೆ ಮನೆಗೆ ಹೋಗಿ ಜನರ ಆರೋಗ್ಯ ತಪಾಸಣೆ ನಡೆಸುವ ಗೃಹ ಆರೋಗ್ಯ ಸೇವೆಗೆ ಚಾಲನೆ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೂತನವಾಗಿ ಗೃಹ ಆರೋಗ್ಯ, ಆರೋಗ್ಯ ಸೇವೆ ಮನೆ ಬಾಗಿಲಿಗೆ ಎಂಬ ಜನಾರೋಗ್ಯ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಕಾಯಿಲೆಗಳನ್ನು, ಆರೋಗ್ಯ ಸಮಸ್ಯೆಗಳನ್ನು ಗುಟ್ಟಾಗಿ ಇಟ್ಟು ಅನಾಹುತ ತಂದುಕೊಳ್ಳಬಾರದು. ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಬಡವರಿಗೂ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲು ಸಾಧ್ಯ ಆಗಲಿ ಎನ್ನುವ ಕಾರಣದಿಂದಲೇ ಮನೆಬಾಗಿಲಿಗೆ ಆರೋಗ್ಯ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದರು. 

ಬಹಳ ಜನರಿಗೆ ವೈದ್ಯರಿಗೆ ತಪಾಸಣೆ ವೆಚ್ಚ ಕೊಡುವುದಕ್ಕೂ ಸಾಧ್ಯವಾಗುವುದಿಲ್ಲ. ಆದರೆ ಇಂಥವರಿಗೂ ಆರೋಗ್ಯದ ಹಕ್ಕು ಇದೆ. ತಪಾಸಣೆಯಿಂದ ಸಾಂಕ್ರಾಮಿಕ ರೋಗಗಳು, ಸಾಂಕ್ರಾಮಿಕವಲ್ಲದ ರೋಗಗಳೂ ಪತ್ತೆಯಾಗುತ್ತವೆ. 

ಬಹಳ ಜನ ಆರೋಗ್ಯ ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡುವ ಮಹತ್ವದ ಕಾರ್ಯಕ್ರಮ ಆರಂಭಿಸಿದ್ದೇವೆ. ಮನೆ ಬಾಗಿಲಿಗೆ ಆರೋಗ್ಯ ಸವಲತ್ತು ಒದಗಿಸುವ ಗುರಿ ನಮ್ಮದಾಗಿದೆ ಎಂದರು. ಕ್ಯಾನ್ಸರ್ ಕೂಡ ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಶಿಸ್ತಿನ ವ್ಯಾಯಾಮಯುಕ್ತ ಜೀವನಶೈಲಿ ಮುಖ್ಯ. 

ಒತ್ತಡದ ಜೀವನದಿಂದಲೂ ಕಾಯಿಲೆಗಳು ಬರುತ್ತವೆ. ಈಗ ರಸಾಯನಿಕ ಬಳಸಿದ ಆಹಾರದ ಸೇವನೆ ಹೆಚ್ಚಾಗಿರುವುದರಿಂದಲೂ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ ಎಂದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್ ಉಪಸ್ಥಿತಿರಿದ್ದರು.