ಬೆಂಗಳೂರು : ಸಿಇಟಿ-2026 - ಅರ್ಜಿ ಸಲ್ಲಿಕೆಗೆ ಫೆ.27 ಕಡೇ ದಿನ, ತಿದ್ದುಪಡಿಗೆ ಮಾರ್ಚ್ 30ರವರೆಗೆ ಅವಕಾಶ

ಬೆಂಗಳೂರು : ಸಿಇಟಿ-2026 - ಅರ್ಜಿ ಸಲ್ಲಿಕೆಗೆ ಫೆ.27 ಕಡೇ ದಿನ, ತಿದ್ದುಪಡಿಗೆ ಮಾರ್ಚ್ 30ರವರೆಗೆ ಅವಕಾಶ

ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (CET-2026) ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅವಕಾಶ ಕಲ್ಪಿಸಿದೆ. ಅರ್ಜಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಮಾರ್ಚ್ 30ರವರೆಗೆ ಗಡುವು ನೀಡಲಾಗಿದೆ ಎಂದು ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. 

ಪ್ರಸ್ತುತ, ಅರ್ಜಿ ಸಲ್ಲಿಸಲು ಫೆಬ್ರವರಿ 27 ಕೊನೆಯ ದಿನಾಂಕವಾಗಿದ್ದು, ಶುಲ್ಕ ಪಾವತಿಗೆ ಮಾರ್ಚ್ 3 ಅಂತಿಮ ದಿನವಾಗಿದೆ. ಈ ನಿಗದಿತ ದಿನಾಂಕಗಳೊಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ಆದರೆ, ಅರ್ಜಿ ಸಲ್ಲಿಕೆ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ. 

ಅರ್ಜಿ ತಿದ್ದುಪಡಿ ಪ್ರಕ್ರಿಯೆ 

ಅರ್ಜಿಯಲ್ಲಿ ತಿದ್ದುಪಡಿಗಳನ್ನು ಮಾಡಿದ ನಂತರ, 'ಸಬ್ಮಿಟ್' ಮಾಡುವ ಹಂತದಲ್ಲಿ ನೀಡಿದ ಮಾಹಿತಿಗಳು ಸರ್ವರ್‌ನಲ್ಲಿ ಸೇವ್ ಆಗುತ್ತವೆ. ಆದ್ದರಿಂದ, ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ, ಎಚ್ಚರಿಕೆಯಿಂದ ತಿದ್ದುಪಡಿಗಳನ್ನು ಮಾಡುವಂತೆ ಇಸ್ಲಾವುದ್ದೀನ್ ಗದ್ಯಾಳ ಸಲಹೆ ನೀಡಿದ್ದಾರೆ. 

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ 

ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಆರ್.ಡಿ. ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಆರ್.ಡಿ. ಸಂಖ್ಯೆ ಇರುವ ಪ್ರಮಾಣಪತ್ರವನ್ನು ಸಂಬಂಧಿಸಿದ ತಹಶೀಲ್ದಾರರಿಂದ ಪಡೆದು, ಮಾರ್ಚ್ 30ರೊಳಗೆ ಅರ್ಜಿ ಪೋರ್ಟಲ್‌ ನಲ್ಲಿ ಎಡಿಟ್ ಮಾಡುವ ಮೂಲಕ ದಾಖಲಿಸಬೇಕು. 

ಸದ್ಯ, 40 ಸಾವಿರ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಕೇವಲ 20 ಸಾವಿರ ಅಭ್ಯರ್ಥಿಗಳು ಮಾತ್ರ ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್.ಡಿ. ಸಂಖ್ಯೆಯನ್ನು ನಮೂದಿಸಿದ್ದಾರೆ. ಉಳಿದ 20 ಸಾವಿರ ಮಂದಿ ಹಳೆಯ ಅಥವಾ ಕೇವಲ 'ಪರಿಶಿಷ್ಟ ಜಾತಿ' ಎಂದು ನಮೂದಾಗಿರುವ ಆರ್.ಡಿ. ಸಂಖ್ಯೆಯನ್ನು ದಾಖಲಿಸಿದ್ದಾರೆ. ಹೀಗಾಗಿ, ಇದುವರೆಗೂ ಒಳ ಮೀಸಲಾತಿ ಪ್ರಕಾರ ಪ್ರಮಾಣಪತ್ರ ಪಡೆಯದವರು ತಕ್ಷಣವೇ ತಹಶೀಲ್ದಾರರಿಂದ ಹೊಸ ಪ್ರಮಾಣಪತ್ರ ಪಡೆದು, ಹೊಸ ಆರ್.ಡಿ. ಸಂಖ್ಯೆಯನ್ನು ದಾಖಲಿಸಬೇಕು ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್.ಡಿ. ಸಂಖ್ಯೆಯನ್ನು ನಮೂದಿಸಿದ ಅಭ್ಯರ್ಥಿಗಳನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಕೆಇಎ ಸ್ಪಷ್ಟಪಡಿಸಿದೆ. 

ನೀಟ್ ಪರೀಕ್ಷೆ ಮತ್ತು ಸೀಟು ಹಂಚಿಕೆ 

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸುವ ನೀಟ್ (NEET) ಪರೀಕ್ಷೆಯ ಅಂಕಗಳನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಈ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಇಚ್ಛಿಸುವವರು ಎನ್‌ಟಿಎಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 

ಎನ್‌ಟಿಎ ನೀಟ್ ಪರೀಕ್ಷೆ ನಡೆಸಿದರೂ, ರಾಜ್ಯದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕೆಇಎ ಮೂಲಕವೇ ಮಾಡಲಾಗುತ್ತದೆ. ಆದ್ದರಿಂದ, ನೀಟ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವವರು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಬೇಕಿದ್ದರೆ, ಕಡ್ಡಾಯವಾಗಿ ಕೆಇಎನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿರಬೇಕು. ನೀಟ್ ಫಲಿತಾಂಶ ಪ್ರಕಟಗೊಂಡ ನಂತರ, ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಲಾಗುವುದು. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.