ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ಎಲ್ಲ ನಿರ್ಬಂಧ ತೆರವು: ಜುಲೈ 1ರಿಂದ ಎಂದಿನಂತೆ ಇಂಧನ ಮಾರಾಟ
ನವದೆಹಲಿ: ಜುಲೈ 1ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ಎಲ್ಲ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ರವಿವಾರ ಆದೇಶ ಹೊರಡಿಸಿದ್ದು, ಜುಲೈ 1ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಹಿಂದಿನಂತೆ ಸಾಮಾನ್ಯ ಕ್ರಮದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಪ್ರತಿ ವ್ಯಕ್ತಿಗೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಬೇಕೆಂಬ ನಿರ್ಬಂಧವನ್ನೂ ಇದೀಗ ಹಿಂಪಡೆಯಲಾಗಿದೆ.
ದೇಶದಲ್ಲಿ ಇಂಧನ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಯ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ, ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಹಿಂದೆ ಜೂನ್ 11ರಂದು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳು ಜುಲೈ 1ರಿಂದ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜೂನ್ 11ರ ಆದೇಶದ ಪ್ರಕಾರ, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಚಿಲ್ಲರೆ ಮಾರಾಟ ಮಳಿಗೆಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಂತಹ ಗ್ರಾಹಕರು ತಮ್ಮ ಅಗತ್ಯಗಳಿಗೆ ಮೀಸಲಾದ ಸರಬರಾಜು ಜಾಲಗಳ ಮೂಲಕವೇ ಇಂಧನ ಖರೀದಿಸಬೇಕೆಂದು ಸೂಚಿಸಲಾಗಿತ್ತು. ಅದೇ ವೇಳೆ, ಸಗಟು ಪ್ರಮಾಣದಲ್ಲಿ ಡೀಸೆಲ್ ಖರೀದಿಸುವ ಗ್ರಾಹಕರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಅಸಹಜ ಬೇಡಿಕೆ ಕಂಡುಬಂದಲ್ಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೇಂದ್ರ ಸರ್ಕಾರ ಈ ಹಿಂದೆ ನಿರ್ದೇಶನ ನೀಡಿತ್ತು. ಇದೀಗ ಈ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿದೆ.