ಲೋಕಸಭಾ ಚುನಾವಣೆ 2024 - ಕರ್ನಾಟಕದಲ್ಲಿ ಇಂದಿನಿಂದ ಮನೆಯಿಂದಲೇ ಮತದಾನ : ಮನೆ ಬಾಗಿಲಿಗೆ ಬರಲಿದೆ ಮತಗಟ್ಟೆ

ಲೋಕಸಭಾ ಚುನಾವಣೆ 2024 - ಕರ್ನಾಟಕದಲ್ಲಿ ಇಂದಿನಿಂದ ಮನೆಯಿಂದಲೇ ಮತದಾನ : ಮನೆ ಬಾಗಿಲಿಗೆ ಬರಲಿದೆ ಮತಗಟ್ಟೆ

ಬೆಂಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣಾ 2024ರ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗದಿಂದ ಈಗಾಗಲೇ ಹೊರಡಿಸಲಾಗಿದ್ದು, ಅದರಂತೆ ಮನೆಯಿಂದಲೇ ಮತದಾನ ಮಾಡಲು ಇಚ್ಛಿಸುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. 

ಈ ಹಿನ್ನಲೆಯಲ್ಲಿ ಏಪ್ರಿಲ್ 13 ರಿಂದ ಏಪ್ರಿಲ್ 18 ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬರು ಮೈಕ್ರೋ ವೀಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಡಿಡಿಒಗಳನ್ನು ಒಳಗೊಂಡಂತೆ ಒಟ್ಟು 13 ತಂಡಗಳನ್ನು ರಚಿಸಲಾಗಿದೆ. 

ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಏ. 13 ರಿಂದ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಮತದಾರರ ಮನೆ ಬಾಗಿಲಿಗೆ ತೆರಳಲು ಒಂದು ದಿನ ಮುಂಚಿತವಾಗಿ ಸೆಕ್ಟರ್ ಅಧಿಕಾರಿ ಹಾಗೂ ಬಿಎಲ್‌ಓಗಳ ಮುಖಾಂತರ ಮತದಾರರಿಗೆ ಮಾಹಿತಿಯನ್ನು ರವಾನಿಸಲಾಗುವುದು. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. 

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಇಚ್ಛಿಸಿದ್ದಲ್ಲಿ ಅವರಿಗೂ ಸಹ ಮತದಾನ ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ. ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗುತ್ತದೆ. ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ ಹೋಗುತ್ತಾರೆ. ಈ ವೇಳೆ ಮತದಾರರು ಸಿಗದಿದ್ದರೆ, ಬಳಿಕ ಮತದಾನಕ್ಕೆ ಅವಕಾಶವಿರುವುದಿಲ್ಲ.