ಇನ್ಮುಂದೆ ತತ್ಕಾಲ್ ಟ್ರೈನ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ವೆರಿಫಿಕೇಶನ್ ಕಡ್ಡಾಯ

ನವದೆಹಲಿ : ಇನ್ಮುಂದೆ ರೈಲು ಸಂಚಾರಕ್ಕಾಗಿ ತತ್ಕಾಲ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತರಲು ಭಾರತೀಯ ರೈಲ್ವೆ ಮುಂದಾಗಿದೆ. ಆನ್ಲೈನ್ ನಲ್ಲಿ ತತ್ಕಾಲ್ ಟ್ರೈನ್ ಟಿಕೆಟ್ ಬುಕ್ ಮಾಡುವವರಿಗೆ ಈ ಬದಲಾವಣೆ ನೇರ ಪರಿಣಾಮ ಬೀರಲಿದೆ.
ಹೌದು ತತ್ಕಾಲ್ ಟಿಕೆಟ್ ಬುಕ್ ಮಾಡಲು ಆಧಾರ್ ವೆರಿಫಿಕೇಶನ್ ಕಡ್ಡಾಯಗೊಳಿಸಲು ಭಾರತೀಯ ರೈಲ್ವೆ ಇಲಾಖೆ ಸಜ್ಜಾಗುತ್ತಿದೆ. ಈ ನಿರ್ಧಾರಕ್ಕೆ ಪ್ರಮುಖ ಕಾರಣವೇನು ಎಂಬ ಪ್ರಮುಖ ಮಾಹಿತಿ ಇಲ್ಲಿದೆ. ಐಆರ್‌ಸಿಟಿಸಿ ಅಕೌಂಟ್ ದುರುಪಯೋಗ ಮತ್ತು ವಂಚನೆಯನ್ನು ಕಡಿಮೆ ಮಾಡಲು ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ನಿಜವಾದ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಇನ್ನು ಸುಲಭವಾಗಲಿದೆ. ಬುಕಿಂಗ್ ಸಮಯದಲ್ಲಿ ಗುರುತನ್ನು ಡಿಜಿಟಲ್ ಮೂಲಕ ಪರಿಶೀಲಿಸುವ ಮೂಲಕ, ವಂಚನೆಯ ವಹಿವಾಟುಗಳನ್ನು ಎದುರಿಸಲು ರೈಲ್ವೆಗಳು ಹೆಚ್ಚು ಪಾರದರ್ಶಕ ಮತ್ತು ನ್ಯಾಯಯುತ ಟಿಕೆಟ್ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ.
ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ಭಾರತೀಯ ರೈಲ್ವೆ ಕಡ್ಡಾಯ ಇ-ಆಧಾರ್ ದೃಢೀಕರಣವನ್ನು ಪರಿಚಯಿಸಲು ಸಜ್ಜಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಹೊಸ ವ್ಯವಸ್ಥೆಯ ಅನುಷ್ಠಾನವು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.