ಇಂದಿನಿಂದ ಅನ್ನಭಾಗ್ಯ, ಗೃಹಜ್ಯೋತಿ : ಅಕ್ಕಿ ಬದಲು ಹಣ ವರ್ಗಾವಣೆ - ಉಚಿತ ವಿದ್ಯುತ್ ಆಗಸ್ಟ್ ಬಿಲ್ಗೆ ಅನ್ವಯ

ಇಂದಿನಿಂದ ಅನ್ನಭಾಗ್ಯ, ಗೃಹಜ್ಯೋತಿ : ಅಕ್ಕಿ ಬದಲು ಹಣ ವರ್ಗಾವಣೆ - ಉಚಿತ ವಿದ್ಯುತ್ ಆಗಸ್ಟ್ ಬಿಲ್ಗೆ ಅನ್ವಯ

ಬೆಂಗಳೂರು : ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ 'ಶಕ್ತಿ' ಯಶಸ್ವಿಯಾಗಿ ಜಾರಿಗೆ ಬಂದ ಬೆನ್ನ ಹಿಂದೆಯೇ ಮಹತ್ವಾಕಾಂಕ್ಷಿ 'ಅನ್ನಭಾಗ್ಯ' ಹಾಗೂ 'ಗೃಹಜ್ಯೋತಿ' ಯೋಜನೆಗಳನ್ನು ಇಂದು ಜುಲೈ 1ರಿಂದ ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಲಾಗಿದೆ. 

ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಅನುಷ್ಠಾನಕ್ಕೆ ಬರುತ್ತಿರುವುದು ವಿಶೇಷ. ಹಾಗೆಯೇ ಯೋಜನೆಗೆ ಎದುರಾದ ಅನಿರೀಕ್ಷಿತ ಸವಾಲುಗಳನ್ನು ಒಂದೊಂದಾಗಿ ಬದಿಗೆ ಸರಿಸಿ ಜನರಲ್ಲಿ ವಿಶ್ವಾಸ ತುಂಬಲು ಸರ್ಕಾರ ಪ್ರಯತ್ನ ನಡೆಸಿರುವುದೂ ಸ್ಪಷ್ಟವಾಗಿದೆ. 

ಜುಲೈ 3ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷ ಹೋರಾಟಕ್ಕೆ ಸಜ್ಜಾಗಿದೆ. ಈ ನಡುವೆ ಸರ್ಕಾರ ಯೋಜನೆಗೆ ಚಾಲನೆ ಕೊಡುವ ಮೂಲಕ ಹೋರಾಟದ ತೀವ್ರತೆ ಕುಗ್ಗುವಂತೆ ಮಾಡುತ್ತಿದೆ. 

ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತಾಗಿ ರಾಜ್ಯ ಸರ್ಕಾರದಿಂದ ಐದು ಕೆಜಿ ಅಕ್ಕಿಯ ಬದಲು ತಕ್ಷಣಕ್ಕೆ ಹಣ ನೀಡಲು ಉದ್ದೇಶಿಸಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಬಿಪಿಎಲ್ ಕಾರ್ಡ್ದಾರರ ಖಾತೆಗೆ ಹಣ ಜಮಾ ಆಗಲಿದೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾತು ಕೊಟ್ಟಂತೆ ಜುಲೈ 1ರಿಂದ ಯೋಜನೆ ಜಾರಿಯಾಗಲಿದೆ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತದೆ ಎಂದಿದ್ದಾರೆ.