ಬೆಂಗಳೂರು : ಇನ್ಮುಂದೆ ಬಾಲ್ಯ ನಿಶ್ಚಿತಾರ್ಥವೂ ನಿಷಿದ್ಧ, ಶಿಕ್ಷಾರ್ಹ!!

ಬೆಂಗಳೂರು : ಇನ್ಮುಂದೆ ಬಾಲ್ಯ ನಿಶ್ಚಿತಾರ್ಥವೂ ನಿಷಿದ್ಧ, ಶಿಕ್ಷಾರ್ಹ!!

ಬೆಂಗಳೂರು : ಸಾಮಾಜಿಕ ಪಿಡುಗುಗಳಲ್ಲೊಂದಾದ ಬಾಲ್ಯ ವಿವಾಹ ನಿಷಿದ್ಧ ಮತ್ತು ಶಿಕ್ಷಾರ್ಹ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಇದೀಗ ಬಾಲ್ಯ ನಿಶ್ಚಿತಾರ್ಥವೂ ನಿಷಿದ್ಧ ಮತ್ತು ಶಿಕ್ಷಾರ್ಹ! 

ಹೌದು.... ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ವಿಧೇಯಕ-2025 ಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಆಗಷ್ಟ್11ರಿಂದ ನಡೆಯಲಿರೋ ವಿಧಾನಸಭೆ ಮಳೆಗಾಲದ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕ್ಯಾಬಿನೆಟ್ ಸಭೆಯ ಬಳಿಕ ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದ್ದಾರೆ. 

ಏನಿದು ಬಾಲ್ಯ ನಿಶ್ಚಿತಾರ್ಥ? 

ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ 18 ವರ್ಷದೊಳಗಿನ ಹೆಣ್ಣು ಮತ್ತು 21 ವರ್ಷದೊಳಗಿರುವ ಗಂಡು ವಿವಾಹವಾಗೋದು ನಿಷಿದ್ಧ. ಒಂದು ವೇಳೆ ಇಂಥ ಅಪ್ರಾಪ್ತರಿಗೆ ವಿವಾಹವನ್ನು ನೆರವೇರಿಸಿದರೆ ಅಂಥ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತೆ. ಆರೋಪ ಸಾಬೀತಾದರೆ ಅಂಥವರಿಗೆ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. 

ಆದಾಗ್ಯೂ ಕೂಡ ಬಾಲ್ಯ ವಿಹಾಗಳನ್ನು ಸಂಪೂರ್ಣವಾಗಿ ತಡೆಯಲು ಕಾನೂನಿಗೆ ಸಾಧ್ಯವಾಗಿರಲಿಲ್ಲ. ಇದಕ್ಕೆ ಪ್ರೇರಣೆ ಎಂಬಂತೆ ಬಾಲ್ಯ ನಿಶ್ಚಿತಾರ್ಥಗಳು ಎಗ್ಗಿಲ್ಲದೇ ನಡೆಯುತ್ತಿದ್ದವು. ಇದನ್ನು ಮನಗಂಡ ಸರ್ಕಾರ ಇದೀಗ ಬಾಲ್ಯ ನಿಶ್ಚಿತಾರ್ಥಕ್ಕೂ ಕಡಿವಾಣ ಹಾಕಲು‌ ಮುಂದಾಗಿರೋದೊಂದು ಸ್ವಾಗತಾರ್ಹ ಕ್ರಮ. 

2001ರ ಜನ ಗಣತಿಯ ಪ್ರಕಾರ, ನಮ್ಮ ದೇಶದಲ್ಲಿ 15. ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಸುಮಾರು 1.5 ಮಿಲಿಯನ್ ನಷ್ಟು ಹುಡುಗಿಯರು ಈಗಾಗಲೇ ಬಾಲ್ಯ ವಿವಾಹವಾಗಿದ್ದಾರೆ! 

2021ರ ಡಿಸೆಂಬರ್ ತಿಂಗಳಲ್ಲಿ ನಡೆದ ಲೋಕಸಭೆ ಅಧಿವೇಶನದಲ್ಲಿ ಮಹಿಳೆಯರ ಮದುವೆ ವಯಸ್ಸನ್ನು 18ರ ಬದಲಾಗಿ 21ಕ್ಕೆ ಹೆಚ್ಚಿಸಲು ಅಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ತಿದ್ದುಪಡಿ ಮಸೂದೆಯನ್ನು ಪರಿಚಯಿಸಿದ್ದರು.