ಬೆಂಗಳೂರು: ಡಿಸಿಇಟಿ - 2ನೇ ಸುತ್ತಿನ ಸೀಟು ಹಂಚಿಕೆ ಆರಂಭ

ಬೆಂಗಳೂರು: 3ನೇ ಸೆಮಿಸ್ಟರ್ ಅಥವಾ 2ನೇ ವರ್ಷದ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ನೇರ ಪ್ರವೇಶ ಕಲ್ಪಿಸುವ ಡಿಸಿಇಟಿ-25 ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದ್ದು, ಕಾಲೇಜಿಗೆ ವರದಿ ಮಾಡಿಕೊಳ್ಳಲು ಜುಲೈ 30 ಕೊನೆ ದಿನವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಿಸಿಕೊಳ್ಳಲು ಹಾಗೂ ತೆಗೆದು ಹಾಕಲು ಜುಲೈ 26ರ ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ. ಜುಲೈ 26ರಂದು ಸಂಜೆ 8ಕ್ಕೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕ ಪಾವತಿ ಮತ್ತು ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಲು ಜು.28ರಂದು ಮಧ್ಯಾಹ್ನ 1ರಿಂದ ಜುಲೈ 30ರ ಸಂಜೆ 4ಗಂಟೆವರೆಗೆ ಅವಕಾಶ ನೀಡಲಾಗಿದೆ. ಜುಲೈ 30ರಂದು 6ಗಂಟೆಯೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಂಇ / ಎಂಟೆಕ್ ಆಯ್ದ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿರುವ ಈ ಕೆಳಗಿನ ಕೋರ್ಸ್ ಗಳ ಅಭ್ಯರ್ಥಿಗಳು ಜುಲೈ 28ರಂದು ದಾಖಲೆ ಪರಿಶೀಲನೆಗೆ ಪದವಿ ಪರೀಕ್ಷೆಯ ಎಲ್ಲಾ ಸೆಮಿಸ್ಟರ್ /ವರ್ಷಗಳ ಅಂಕಪಟ್ಟಿಗಳು ಹಾಗು ಇತರೆ ಮೂಲ ದಾಖಲೆಗಳೊಂದಿಗೆ ಕೆಇಎ ಕಚೇರಿಗೆ ಬರಬೇಕು.
ಜೈವಿಕ ತಂತ್ರಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಪರಿಸರ ಎಂಜಿನಿಯರಿಂಗ್, ಪಾಲಿಮರ್ ವಿಜ್ಞಾನ ಮತ್ತು ಜವಳಿ ತಂತ್ರಜ್ಞಾನ & ವಾಸ್ತುಶಿಲ್ಪ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆಯು ಅಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ನಿಯಮಾನುಸಾರ ರಾಂಕ್ ನೀಡಲಾಗುವುದು. ಎಂ.ಆರ್ಕಿಟೆಕ್ಟರ್ ಕೋರ್ಸ್ ಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಪಿಜಿಇಟಿಎ -2025ರಲ್ಲಿ ಪಡೆದಿರುವ ಅಂಕಪಟ್ಟಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಪಿಜಿಸಿಇಟಿ-2025ಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಮಾರ್ಪಡಿಸಲು ಜುಲೈ 24ರಿಂದ 27ರವರೆಗೆ ಅಂತಿಮ ಅವಕಾಶ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿರುವ ವಿವರಗಳನ್ನು ಮಾರ್ಪಡಿಸಲು ಮುಂದಾಗುವ ಮುನ್ನ ಅರ್ಜಿಯಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಹಾಗೂ ಮೀಸಲಾತಿ ವಿವರಗಳನ್ನು ತಪ್ಪದೆ ಪರಿಶೀಲಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.