ಸರ್ವಕಾಲಿಕ ಕುಸಿತ ಕಂಡ ಭಾರತದ ಆರ್ಥಿಕತೆ; ಶೇ.23.9ರಷ್ಟು ಋಣಾತ್ಮಕ ಕುಸಿತಕ್ಕೀಡಾದ ಜಿಡಿಪಿ

ಸರ್ವಕಾಲಿಕ ಕುಸಿತ ಕಂಡ ಭಾರತದ ಆರ್ಥಿಕತೆ; ಶೇ.23.9ರಷ್ಟು ಋಣಾತ್ಮಕ ಕುಸಿತಕ್ಕೀಡಾದ ಜಿಡಿಪಿ

ನವದೆಹಲಿ ; ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಪ್ರಸ್ತುತ ವರ್ಷದ ಏಪ್ರಿಲ್-ಜೂನ್ ತಿಂಗಳ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.23.9ಕ್ಕೆ ಋಣಾತ್ಮಕವಾಗಿ ಭಾರೀ ಇಳಿಕೆ ಕಂಡಿದೆ. 

ಇದು ಭಾರತದ ಸರ್ವಕಾಲಿಕ ಆರ್ಥಿಕ ಕುಸಿತ ಎಂದು ಸರ್ಕಾರದ ಅಧಿಕೃತ ಮಾಹಿತಿ ಇದೀಗ ಹೊರಬಿದ್ದಿದೆ. 

ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕಾರಣದಿಂದಾಗಿ ದೇಶದಲ್ಲಿ ಕಳೆದ ಮಾರ್ಚ್ನಿಂದ ನಿರಂತರವಾಗಿ ಸುದೀರ್ಘ ಅವಧಿಯ ಲಾಕ್ಡೌನ್ ಘೋಷಿಸಲಾಗಿತ್ತು. 

ಪರಿಣಾಮ ಪ್ರಮುಖ ಕೈಗಾರಿಕೆಗಳು ಸ್ಥಗಿತಗೊಂಡಿದ್ದರಿಂದಾಗಿ ಲಕ್ಷಾಂತರ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು. 

ಕಳೆದ 40 ವರ್ಷದಲ್ಲಿ ಭಾರತ ಈ ಹಿಂದೆ ಎಂದೂ ಕಾಣದ ಮಟ್ಟಿಗಿನ ನಿರುದ್ಯೋಗ ಸಮಸ್ಯೆಯನ್ನು ಎದುರಿಸಿತ್ತು. ಇದೆಲ್ಲದರ ಪರಿಣಾಮ ಇಡೀ ದೇಶದ ಆರ್ಥಿಕತೆ ಕುಸಿದಿದೆ ಎನ್ನಲಾಗುತ್ತಿದೆ. 

ಭಾರತವು ತ್ರೈಮಾಸಿಕ ಅಂಕಿ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ 1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆಯಲ್ಲಿ ಈ ಪ್ರಮಾಣದ ಇಳಿಕೆ ದಾಖಲಾಗಿದೆ. 

ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಒಂದಾದ ಭಾರತದ ಪಾಲಿಗೆ ಇದು ಅತ್ಯಂತ ಕೆಟ್ಟ ಆರ್ಥಿಕ ಕುಸಿತ ಎಂದು ಅರ್ಥಶಾಸ್ತ್ರಜ್ಞರು ಬಣ್ಣಿಸಿದ್ದಾರೆ. 

2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಎನ್ ಎಸ್ ಒ ಅಂಕಿ ಅಂಶ ಹೇಳಿತ್ತು. 

ಬ್ಲೂಂಬರ್ಗ್ ಆರ್ಥಿಕ ತಜ್ಞರ ಲೆಕ್ಕಚಾರದ ಪ್ರಕಾರ ಭಾರತದ ಆರ್ಥಿಕತೆ ಶೇ.15 ರಿಂದ ಶೇ.25.9 ರ ನಡುವೆ ಕುಸಿಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. 

ಪ್ರಸ್ತುತ ಆರ್ಥಿಕ ಕುಸಿತವು ಎರಡನೇ ತ್ರೈಮಾಸಿಕದಲ್ಲೂ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. 

2019–2020 ನೇ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.5.2 ದಾಖಲಾಗಿತ್ತು. 2ನೇ ತ್ರೈಮಾಸಿಕದಲ್ಲಿ ಶೇ.4.4 ದಾಖಲಾದರೆ, 3ನೇ ತ್ರೈಮಾಸಿಕದಲ್ಲಿ ಶೇ.4.1 ದಾಖಲಾಗಿ, 4ನೇ ತ್ರೈಮಾಸಿಕದ ಹೊತ್ತಿಗೆ ಶೇ.3.1ಕ್ಕೆ ಕುಸಿತ ಕಂಡಿತ್ತು. 

ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಅದಾಗಲೇ ಕುಸಿತ ಕಂಡಿದ್ದ ಭಾರತದ ಆರ್ಥಿಕತೆಯನ್ನು ಕೊರೋನಾ ಸಂಪೂರ್ಣವಾಗಿ ನೆಲ ಕಚ್ಚಿಸಿದೆ. 

ಪ್ರಸ್ತುತ 2020–21 ನೇ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲೇ ಭಾರತದ ಜಿಡಿಪಿ ಶೇ.23.9 ರಷ್ಟು ಋಣಾತ್ಮಕವಾಗಿ ಇಳಿಕೆಯಾಗಿದೆ. 

ಈ ಇಳಿಕೆ ಎರಡನೆ ತ್ರೈಮಾಸಿಕದಲ್ಲೂ ಮುಂದುವೆರೆಯಲಿದೆ ಎಂದು ಹೇಳಲಾಗುತ್ತಿದೆ. 

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇ.10 ಕ್ಕೆ ಸಮನಾದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ ಹೊರತಾಗಿಯು ದೇಶದಲ್ಲಿ ಬೇಡಿಕೆ ಮತ್ತು ಉತ್ಪಾದನೆ ಇನ್ನೂ ಚೇತರಿಸಿಕೊಂಡಿಲ್ಲ. 

ದೇಶದಲ್ಲಿ ಕೊರೋನಾ ಪ್ರಾರಂಭವಾಗುವುದಕ್ಕೆ ಮುಂಚೆ ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆ ಮತ್ತು ಕಡಿಮೆ ಬೇಡಿಕೆಯ ಹೊರತಾಗಿಯೂ ಭಾರತದ ಆರ್ಥಿಕತೆಯನ್ನು ಅಂದಾಜು 2.8 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು. 

2024 ರವೇಳೆಗೆ ಇದನ್ನು 5 ಟ್ರಿಲಿಯನ್ ಡಾಲರ್ ಆಗಿ ಪರಿವರ್ತಿಸುವ ಗುರಿಯನ್ನು ಬಿಜೆಪಿ ಸರ್ಕಾರ ಹೊಂದಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. 

ಆದರೆ, ಕಳೆದ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್, "ಕೊರೋನಾ ಸಾಂಕ್ರಾಮಿ ರೋಗವು ದೇವರ ಕಾರ್ಯ. ಹಾಗಾಗಿಯೇ ಜಿಎಸ್ಟಿ ಸಂಗ್ರಹದಲ್ಲಿ ಕುಸಿತವಾಗಿದೆ. 

ಪರಿಣಾಮ ರಾಜ್ಯಗಳಿಗೆ ನೀಡಬೇಕಾದ ಹೆಚ್ಚುವರಿ ಹಣವನ್ನು ನೀಡಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದರು. 


ಸಚಿವೆಯ ಈ ಹೇಳಿಕೆ ಬೆನ್ನಿಗೆ ಇದೀಗ ದೇಶದ ಜಿಡಿಪಿ ದರ ಬಹಿರಂಗವಾಗಿದ್ದು ಮತ್ತಷ್ಟು ಕಳವಳಕಾರಿಯಾಗಿದೆ. ಈ ಬೆಳವಣಿಗೆ ಹೀಗೆ ಸಾಗಿದರೆ ಮುಂದಿನ ದಿನಗಳಲ್ಲಿ ಮಧ್ಯಮ ಮತ್ತು ಕೆಳ ವರ್ಗದ ಜನ ಸಾಕಷ್ಟು ತೊಂದರೆಗಳನ್ನು ಅನುಭವಿಸಲಿದ್ದಾರೆ. 

ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಮತ್ತಷ್ಟು ಪರದಾಡಲಿದ್ದಾರೆ. ಕೈಗಾರಿಕಾ ವಲಯ ಸಂಪೂರ್ಣ ನಷ್ಟ ಅನುಭವಿಸಲಿದೆ ಎಂದು ಹೇಳಲಾಗುತ್ತಿದೆ.