ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಸಿಂಗಂ ಖ್ಯಾತಿಯ ಅಣ್ಣಾಮಲೈ

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಸಿಂಗಂ ಖ್ಯಾತಿಯ ಅಣ್ಣಾಮಲೈ

ನವದೆಹಲಿ: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಸಿಂಗಂ ಖ್ಯಾತಿಯ ಅಣ್ಣಾಮಲೈ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ತಮ್ಮ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. 


ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ , ಬಿಜೆಪಿ ಶಾಲು ಹೊದಿಸಿ, ಗಣ್ಯರ ಸಮ್ಮುಖದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವುದರೊಂದಿಗೆ ಬಿಜೆಪಿಗೆ ಅಣ್ಣಾಮಲೈ ಸೇರ್ಪಡೆಯಾದರು. 

ಕಳೆದ ಒಂದು ವರ್ಷದಿಂದ ಅಣ್ಣಾಮಲೈ ರಾಜಕೀಯಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳಿಗೆ ತೆರೆಬಿದ್ದಿದೆ. ತಮ್ಮ ತವರು ರಾಜ್ಯವಾದ ತಮಿಳುನಾಡಿನಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 

ಮುಂದಿನ ವರ್ಷದ 2021ರ ಮಧ್ಯಭಾಗದಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಯ ಪ್ರಮುಖ ತಾರಾ ಪ್ರಚಾರಕರಾಗಿ ಪಕ್ಷವನ್ನು ಅಣ್ಣಾಮಲೈ ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸಾರ್ವಜನಿಕರ ಸೇವೆ ಮಾಡುವ ಸಂಬಂಧ ರಾಜಕೀಯಕ್ಕೆ ಸೇರಿದ್ದೇನೆ. ಮುಂದೆಯೂ ಪೊಲೀಸ್ ವೃತ್ತಿಯಲ್ಲಿ ಮಾಡಿದಂತೆ ರಾಜಕೀಯವಾಗಿಯೂ ಜನರ ಸೇವೆ ಮಾಡಲಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.