ಹುಬ್ಬಳ್ಳಿ: ನೃಪತುಂಗ ಬೆಟ್ಟಕ್ಕೆ ವಲಯ ಅರಣ್ಯಾಧಿಕಾರಿ ಭೇಟಿ: ಪರಿಶೀಲನೆ ನಂತರವೇ ಖಚಿತ ಮಾಹಿತಿ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಸ್.ಎಂ.ತೆಗ್ಗಿನಮನಿ, ಕಳೆದ ರಾತ್ರಿ ಬೆಟ್ಟದಲ್ಲಿ ಚಿರತೆ ನೋಡಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಚಿರತೆ ಹೆಜ್ಜೆ ಗುರುತುಗಳ ಪರಿಶೀಲನೆ ನಡೆಸಲಾಗಿದೆ ಎಂದರು. ಇತ್ತೀಚೆಗೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿ ಚಿರತೆ ಪ್ರತ್ಯಕ್ಷವಾಗಿತ್ತು ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಬೋನ್ ಇಡಲಾಗಿತ್ತಾದರೂ ಚಿರತೆ ಪತ್ತೆಯಾಗಿರಲಿಲ್ಲ. ಇದೀಗ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಚಿರತೆ ಬಂದಿತ್ತೋ ಅಥವಾ ಬೇರೆ ಯಾವುದಾದರೂ ಪ್ರಾಣಿ ಬಂದಿತ್ತೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಹೆಜ್ಜೆ ಗುರುತುಗಳ ಪರಿಶೀಲನೆ ನಂತರವೇ ಗೊತ್ತಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಎಸ್ ಎಂ ತೆಗ್ಗಿನಮನಿ ಹೇಳಿದರು.