ಧಾರವಾಡ: ಲೋಕಸಭೆ ಚುನಾವಣೆ - ಆಯುಧಗಳನ್ನು ಠೇವಣಿ ಮಾಡಲು ಆದೇಶ
ಧಾರವಾಡ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಎಲ್ಲ ಬಗೆಯ ಆಯುಧ ಪರವಾನಿಗೆದಾರರು ತಮ್ಮ ಆಯುಧಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಠೇವಣಿ ಇಡಬೇಕು ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಚುನಾವಣಾ ನೀತಿ ಸಂಹಿತೆ ಪೂರ್ಣಗೊಳ್ಳುವವರೆಗೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿದ ಆಯುಧ ಪರವಾನಿಗೆದಾರರು ತಮ್ಮ ಆಯುಧಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರಗಳನ್ನು ತಕ್ಷಣವೇ ಠೇವಣಿ ಮಾಡಲು ವಿಫಲರಾದ ಆಯುಧ ಪರವಾನಿಗೆದಾರರ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ 1860 ರ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಆದೇಶವು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮತ್ತು ಬ್ಯಾಂಕ್, ಇತರ ಖಾಸಗಿ ಹಣಕಾಸು ಸಂಸ್ಥೆಗಳು, ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಆದೇಶದಿಂದ ಯಾರಾದರೂ ಪರವಾನಿಗೆದಾರರು ವಿನಾಯತಿ ಪಡೆಯಬೇಕಾದ್ದಲ್ಲಿ ಸೂಕ್ತ ಸಮರ್ಥನೀಯ ಕಾರಣದೊಂದಿಗೆ ಮಾರ್ಚ್ 22, 2024 ರ ಒಳಗಾಗಿ ಸದಸ್ಯ ಕಾರ್ಯದರ್ಶಿಗಳು, ಶಸ್ತ್ರಾಸ್ತ್ರ, ಸ್ಕ್ರೀನಿಂಗ್ ಸಮಿತಿ ಹುಬ್ಬಳ್ಳಿ-ಧಾರವಾಡ ನಗರ ರವರಿಗೆ ಅರ್ಜಿಯನ್ನು ಸಲ್ಲಿಸಬಹುದು. ಮಾರ್ಚ್ 22 ರ ನಂತರ ಸ್ವೀಕೃತಗೊಂಡ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.