ಸರ್ಕಾರದ ವಿರುದ್ಧ ಸಾರಿಗೆ ನೌಕರರ ಮುಷ್ಕರ ಆರಂಭ : ರಸ್ತೆಗಿಳಿಯದ KSRTC, BMTC ಬಸ್ಗಳು, ಖಾಸಗಿ ಬಸ್ಗಳಿಗೆ ಮೊರೆ

ಸರ್ಕಾರದ ವಿರುದ್ಧ ಸಾರಿಗೆ ನೌಕರರ ಮುಷ್ಕರ ಆರಂಭ : ರಸ್ತೆಗಿಳಿಯದ KSRTC, BMTC ಬಸ್ಗಳು, ಖಾಸಗಿ ಬಸ್ಗಳಿಗೆ ಮೊರೆ

ಬೆಂಗಳೂರು: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಲಿಟ್ಟಿದ್ದಾರೆ. 

ಅಂದಾಜು ₹1800 ಕೋಟಿ ಹಿಂಬಾಕಿ ವೇತನ, ಪಿಎಫ್ ಬಾಕಿ, ವೇತನ ಪರಿಷ್ಕರಣೆ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ, ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ, ಮಾತುಕತೆ ವಿಫಲವಾಗಿ ಮುಷ್ಕರ ಅನಿವಾರ್ಯವಾಯಿತು. 

ಸಂಧಾನ ಸಭೆಯೂ ವಿಫಲವಾದ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ನಿರ್ಧಾರವನ್ನು ಮುಂದುವರಿಸಿದ್ದು, ಇಂದಿನ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. 

ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ಸೇರಿ ಬಹುತೇಕ ಜಿಲ್ಲೆಗಳಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೇ ಮುಷ್ಕರದಲ್ಲಿ ತೊಡಗಿದ್ದಾರೆ. 

ಈ ನಡುವೆ ಕರ್ನಾಟಕ ಹೈಕೋರ್ಟ್ ಮುಷ್ಕರವನ್ನು ಒಂದು ದಿನ ವಿಲಂಬಗೊಳಿಸುವಂತೆ ಸೂಚನೆ ನೀಡಿದ್ದರೂ, ಸಂಘಟನೆಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. 

ಬಸ್ ಬಂದ್‌ನ ಪರಿಣಾಮವಾಗಿ, ರಾಜ್ಯದಾದ್ಯಂತ ಪ್ರಯಾಣಿಕರು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಬಸ್‌ ಸಂಚಾರ ಮುಂದುವರಿದಿದ್ದು, ಬಂದ್ ಬಿಸಿ ತಟ್ಟಿಲ್ಲ.