ಕೆಇಎ ಪ್ರವೇಶಾತಿ, ನೇಮಕಾತಿ ಪರೀಕ್ಷೆ ಮಾಹಿತಿಗಾಗಿ ವಿಕಾಸನ ಯೂಟ್ಯೂಬ್ ಚಾನೆಲ್ ಆರಂಭ

ಕೆಇಎ ಪ್ರವೇಶಾತಿ, ನೇಮಕಾತಿ ಪರೀಕ್ಷೆ ಮಾಹಿತಿಗಾಗಿ ವಿಕಾಸನ ಯೂಟ್ಯೂಬ್ ಚಾನೆಲ್ ಆರಂಭ

ಬೆಂಗಳೂರು: ಸಿಇಟಿ ಅರ್ಜಿ ಭರ್ತಿ, ಆಪ್ಷನ್ ದಾಖಲು, ಸೀಟು ಹಂಚಿಕೆ ಪ್ರಕ್ರಿಯೆ ಸೇರಿದಂತೆ ಪ್ರತಿ ಹಂತದ ಮಾಹಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 'ಕೆಇಎ ವಿಕಾಸನ' (KEA VIKASANA) ಎನ್ನುವ ಯೂಟ್ಯೂಬ್ ಚಾನೆಲ್‌ ಆರಂಭಿಸಿದೆ. 

ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ಶುಕ್ರವಾರ, ಚಾನೆಲ್‌ನಲ್ಲಿ ಮಾತನಾಡುವುದರ ಮೂಲಕ ಅದಕ್ಕೆ ಚಾಲನೆ ನೀಡಿದ್ದಾರೆ. ಆರಂಭಿಕ ಮಾತುಗಳಲ್ಲಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಸಿಇಟಿ ಪ್ರಕ್ರಿಯೆ ಪೂರ್ಣ ವಿವರಗಳನ್ನು ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ಇನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

ಕೇವಲ ಸಿಇಟಿ ಪ್ರಕಿಯೆಗೆ ಮಾತ್ರ ಸೀಮಿತವಾಗದೆ, ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲೂ ಈ ಚಾನೆಲ್‌ ಮೂಲಕ ಮಾಹಿತಿಯನ್ನು ಬಿತ್ತರಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. 

X tweter (@KEA_Karnataka) ಆರಂಭಿಸಿದ ನಂತರ 33 ಸಾವಿರ ಫಾಲೋವರ್ಸ್ ಆಗಿದ್ದು, ಮುಂದಿನ ದಿನಗಳಲ್ಲಿ ಇತರ ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.