ಬೆಂಗಳೂರು: ಮತದಾರರ ಜಾಗೃತಿ ಹಾಗೂ ಚುನಾವಣಾ ಸಿದ್ಧತೆ ಕುರಿತು ಸಮನ್ವಯ ಸಭೆ

ಬೆಂಗಳೂರು: ಮತದಾರರ ಜಾಗೃತಿ ಹಾಗೂ ಚುನಾವಣಾ ಸಿದ್ಧತೆ ಕುರಿತು ಸಮನ್ವಯ ಸಭೆ

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳು (SVEEP), ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಹಾಗೂ ಚುನಾವಣಾ ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಯಿತು. 

ಸಭೆಯಲ್ಲಿ ಚುನಾವಣಾ ಆಯೋಗದ (EC) ಮಾರ್ಗಸೂಚಿಗಳ ಅನುಸಾರವೇ ಎಲ್ಲಾ SVEEP ಚಟುವಟಿಕೆಗಳನ್ನು ಆಯೋಜಿಸುವಂತೆ ಸೂಚಿಸಲಾಯಿತು. ಶಾಲೆಗಳು, ಕಾಲೇಜುಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು ಎಂದು ತಿಳಿಸಲಾಯಿತು. 

SVEEP ಕಾರ್ಯಕ್ರಮಗಳು ಹಾಗೂ ಚುನಾವಣಾ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮ ಹಾಗೂ ಚಟುವಟಿಕೆಯ ಸಮಗ್ರ ದಾಖಲಾತಿ (Documentation) ಕಡ್ಡಾಯವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕಾರ್ಯವನ್ನು ಶೇ.100ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ಆಯುಕ್ತರ ಕಚೇರಿಯಿಂದ ನೀಡಲಾಗುವ ಅಧಿಕೃತ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ಒದಗಿಸುವಂತೆ ಸೂಚಿಸಲಾಯಿತು. 

ಉಪ ಆಯುಕ್ತರು (DCs) ಸೇರಿದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. 

ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರೆ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ Enumeration Forms ಅನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ಅರ್ಹ ನಾಗರಿಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. 

ಚುನಾವಣಾ ಸಿದ್ಧತೆಗಳನ್ನು Preparation, Training ಹಾಗೂ Execution ಎಂಬ ಮೂರು ಹಂತಗಳಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ, ಜಾಗೃತಿ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳೊಂದಿಗೆ ಸಭೆಗಳು ಹಾಗೂ ಸಾರ್ವಜನಿಕ ಸಂಪರ್ಕ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸುವಂತೆ ಸೂಚಿಸಲಾಯಿತು. 

ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಪಿ.ಎಸ್. ವಸ್ತ್ರದ್, ಸ್ವೀಪ್ ನೋಡಲ್ ಅಧಿಕಾರಿ, ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಕರ್ನಾಟಕ. ಅವರು ವೀಡಿಯೊ ಸಂವಾದದ ಮೂಲಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಮಾರ್ಗದರ್ಶನ ನೀಡಿದರು. 

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪಾಲಿಕೆಯಿಂದ ಒದಗಿಸಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 

ಈ ಸಂದರ್ಭದಲ್ಲಿ ಅಪರ ಆಯುಕ್ತರು (ಕಂದಾಯ-ಪ್ರಭಾರ) ಪಲ್ಲವಿ, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಸೋಮಶೇಖರ್, ಅಮರೇಗೌಡ ಮಾಲಿಪಾಟೀಲ್, ಮಂಗಳಗೌರಿ ಹಾಗೂ ಚುನಾವಣಾ ವಿಭಾಗದ ಅಧಿಕಾರಿಗಳು, ಜಿಲ್ಲಾ ಸಂಯೋಜಕರು ಮತ್ತು ಸಂಬಂಧಿತ ಸಿಬ್ಬಂದಿ ಹಾಜರಿದ್ದರು.