ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ತುರ್ತು ಕ್ಯಾಬಿನೆಟ್ ಸಭೆ: ದೇಶ ಕುತೂಹಲ!
ನವದೆಹಲಿ: ಕೇಂದ್ರ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಶನಿವಾರ) ಬೆಳಗ್ಗೆ 11:30ಕ್ಕೆ ಕೇಂದ್ರ ಸಚಿವ ಸಂಪುಟದ ತುರ್ತು ಸಭೆ ಕರೆದಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸಚಿವ ಸಂಪುಟದ ಸಭೆಗಳು ಪ್ರತಿ ಬುಧವಾರ ನಡೆಯುವುದು ವಾಡಿಕೆ. ಆದರೆ, ವಾರದ ಮಧ್ಯದ ಬದಲು ನಾಳೆ ಶನಿವಾರ ಸಭೆ ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ, ಪ್ರಸ್ತುತ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿರುವುದು ಮತ್ತು ಮಹಿಳಾ ಮೀಸಲಾತಿ ಕಾಯ್ದೆ ಹಾಗೂ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಹತ್ವದ ಮಸೂದೆಗಳು ಚರ್ಚೆಯಲ್ಲಿರುವ ಈ ಹೊತ್ತಿನಲ್ಲಿ, ನಾಳೆಯ ಸಭೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
ನಾಳೆ ಬೆಳಗ್ಗೆ 11:30ಕ್ಕೆ ಸಭೆ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಅನಿರೀಕ್ಷಿತ ಸಭೆ ಇದಾಗಿರುವುದರಿಂದ ಕೇಂದ್ರ ಸರ್ಕಾರ ಯಾವುದೋ ದೊಡ್ಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಸತ್ತಿನ ಕಲಾಪಗಳ ಮಧ್ಯೆಯೇ ನಡೆಯುತ್ತಿರುವ ಈ 'ಅನ್-ಯೂಶುವಲ್' ಸಭೆಯಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬರಲಿವೆ ಎಂಬ ಬಗ್ಗೆ ಇಡೀ ದೇಶ ಕಾತರದಿಂದ ಇದೆ.