ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲ; ದಿಂಬು, ಹಾಸಿಗೆ ಖರೀದಿಯಲ್ಲಿ ಭ್ರಷ್ಟಾಚಾರ: ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ಸರ್ಕಾರ ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ಹೀಗಾಗಿ ಜನರಲ್ಲಿ ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ. ಇದರಿಂದಾಗಿ ಜನರು ಬೆಂಗಳೂರು ತೊರೆ ದು ಹಳ್ಳಿಗಳತ್ತ ಸಾಗಿದ್ದಾರೆ. ಅಲ್ಲದೆ ಸರ್ಕಾರವೇ ಜನರಿಗೆ ರೋಗ ಅಂಟಿಸುತ್ತಿದೆ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಸೋಂಕು ನಿಯಂತ್ರಿಸದೆ ಎರಡೂ ಸರ್ಕಾರಗಳು ಜನರ ಜೀವದ ಜತೆ ಆಟವಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಪ್ರಸರಣ ನಿಯಂತ್ರಿಸುವ ವಿಷಯದಲ್ಲಿ ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ. ಗಳಿಗೆಗೊಂದು ಹೇಳಿಕೆ, ನಿಮಿಷಕ್ಕೊಂದು ತೀರ್ಮಾನ ಮಾಡಿ, ತಾವೂ ಗೊಂದಲಕ್ಕೆ ಸಿಲುಕಿ ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಸರ್ಕಾರ ಮತ್ತೆ ಲಾಕ್ ಡೌನ್ ಮಾಡುತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಸರ್ಕಾರದ ಆಡಳಿತ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಸೋಂಕು ವಿಪರೀತ ಹೆಚ್ಜಳವಾಗುವುದಕ್ಕೆ ಯಾರು ಹೊಣೆ, ಇದನ್ನು ನಿಯಂತ್ರಿಸಲು ಯಾರಾದರೂ ಅಡ್ಡ ಬಂದಿದ್ದಾರೆಯೇ ಎಂಬುವುದಕ್ಕೆ ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕು ಎಂದು ನಾವು ಆರಂಭ ದಿಂದಲೂ ಹೇಳುತ್ತಲೇ ಬಂದಿದ್ದೇವೆ. ಆದರೆ ಬಿಜೆಪಿ ಈ ವಿಚಾರದಲ್ಲೂ ತಮ್ಮ ರಾಜಕೀಯ ಸಾಧಿಸುತ್ತಿದೆ. ನಮ್ಮನ್ನು ಕರೆದು ಚರ್ಚಿಸಿದರೆ ನಾವು ಈ ಬಗ್ಗೆ ಮಾತನಾಡುತ್ತೇವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ದಿಂಬು, ಹಾಸಿಗೆ ಬಾಡಿಗೆಯಲ್ಲೇ ದುಡ್ಡು ಹೊಡೆಯಲಾಗುತ್ತಿದೆ. ಇನ್ನು ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಅಕ್ರಮ ನಡೆದಿದೆ. ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರದ ಸಚಿವರು, ಅಧಿಕಾರಿಗಳ ಅನುಮತಿ ಇಲ್ಲದೆ ಈ ಭ್ರಷ್ಟಾಚಾರ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ನಾಯಿಗೆ ಅನ್ನ ಹಾಕುವಂತೆ ಅವರಿಗೆ ಊಟ ನೀಡಲಾಗುತ್ತಿದೆ.
ಸೋಂಕಿತರು ಸತ್ತರೆ ಅವರ ದೇಹವನ್ನು ಎಸೆಯುತ್ತಿದ್ದೀರಿ. ಇದು ಭಾರತೀಯ ಸಂಸ್ಕೃತಿನಾ? ಇದೇನಾ ನಿಮ್ಮ ಮಾನವೀಯತೆ.. ಏನಾಗಿದೆ ಸರ್ಕಾರಕ್ಕೆ?, ಸರ್ಕಾರ ಇರುವುದು ಕೇವಲ ಅಧಿಕಾರ ಅನುಭವಿಸುವುದಕ್ಕೆ ಅಲ್ಲ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಮುಖ್ಯಮಂತ್ರಿ ಸೇರಿದಂತೆ ಎಷ್ಟು ಮಂತ್ರಿಗಳು ಕೋವಿಡ್ ಆಸ್ಪತ್ರೆಗೆ ಹೋಗಿ ಸೋಂಕಿತರ ಸಂಕಷ್ಟ ಆಲಿಸಿದ್ದೀರಿ..? ಎಂದು ಕಿಡಿಕಾರಿದ್ದಾರೆ.
ರಾಜ್ಯ ಸಚಿವರಗಳ ಮಾತುಗಳನ್ನು ನಾವು ಗಮನಿಸುತ್ತಿದ್ದೇವೆ. ಉಪಮುಖ್ಯಮಂತ್ರಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ನಾನು ಸಿಎಂಗೆ ಪತ್ರ ಬರೆದಿದ್ದು ನಮ್ಮ ಕಾರ್ಯಕರ್ತರು ಆರಂಭದಿಂದ ಜನರ ಸೇವೆ ಮಾಡುತ್ತಿದ್ದು ಸರ್ಕಾರದ ಜತೆಗೂಡಿ ಕೆಲಸ ಮಾಡಲು ಸಿದ್ಧ ಎಂದು ತಿಳಿಸಿದ್ದೇನೆ ಎಂದರು.