ಹೊಸಪೇಟೆ: ಪಿಯುಸಿ ಪರೀಕ್ಷೆಗೆ ಭಯ ಬೇಡ - ವಿದ್ಯಾರ್ಥಿ ಸ್ನೇಹಿ ವಾತಾವರಣ, ಭದ್ರತೆಗೆ ಆದ್ಯತೆ

ಹೊಸಪೇಟೆ: ಪಿಯುಸಿ ಪರೀಕ್ಷೆಗೆ ಭಯ ಬೇಡ - ವಿದ್ಯಾರ್ಥಿ ಸ್ನೇಹಿ ವಾತಾವರಣ, ಭದ್ರತೆಗೆ ಆದ್ಯತೆ

ಹೊಸಪೇಟೆ: ಇದೇ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಹಾಗೂ ಪಾವಿತ್ರ್ಯತೆಯಿಂದ ನಡೆಯಲು ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾಹಿತಿ ನೀಡಿದರು. 

ಪರೀಕ್ಷಾ ಪಾವಿತ್ರ್ಯತೆ ಮತ್ತು ಭದ್ರತೆ 

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪ್ರಶ್ನೆಪತ್ರಿಕೆಗಳು ಪೊಲೀಸ್ ಭದ್ರತೆಯಲ್ಲಿಯೇ ಕೇಂದ್ರಗಳಿಗೆ ತಲುಪಲಿವೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ. 

ವಿದ್ಯಾರ್ಥಿ ಸ್ನೇಹಿ ವಾತಾವರಣ ಮತ್ತು ಶೈಕ್ಷಣಿಕ ನೆರವು 

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉತ್ತಮ ವಾತಾವರಣ, ಕುಡಿಯುವ ನೀರು, ಶೌಚಾಲಯ ಹಾಗೂ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪರೀಕ್ಷಾ ಮುಖ್ಯಸ್ಥರನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚೆ ಹಾಜರಿರಬೇಕು. ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ. 

ಕಳೆದ ಬಾರಿಗಿಂತಲೂ ಹೆಚ್ಚಿನ ಫಲಿತಾಂಶ ನೀಡುವ ಸಲುವಾಗಿ ಸಂಜೆ ಪರಿಹಾರ ಬೋಧನೆ ನಡೆಸಲಾಗಿದ್ದು, ಇಲಾಖೆ ವತಿಯಿಂದ 2 ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಸಹ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶದೊಂದಿಗೆ ರಾಜ್ಯದಲ್ಲಿ 15ರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯಭೀತರಾಗದೆ, ಧೈರ್ಯವಾಗಿ ಎದುರಿಸಬೇಕು ಮತ್ತು ಪರೀಕ್ಷೆಯನ್ನು ಹಬ್ಬವಿದ್ದಂತೆ ಖುಷಿಯಿಂದ ಬರೆಯಲು ಅವರು ಕಿವಿಮಾತು ಹೇಳಿದರು. 

ಪರೀಕ್ಷಾ ಕೇಂದ್ರಗಳು ಮತ್ತು ಹಾಜರಾಗುವ ವಿದ್ಯಾರ್ಥಿಗಳ ವಿವರ 

ಜಿಲ್ಲೆಯಾದ್ಯಂತ ಒಟ್ಟು 23 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ 7, ಹಗರಿಬೊಮ್ಮನಹಳ್ಳಿ 3, ಹೂವಿನಹಡಗಲಿ 3, ಹರಪನಹಳ್ಳಿ 5, ಕೂಡ್ಲಿಗಿ 2 ಮತ್ತು ಕೊಟ್ಟೂರು 3 ಕೇಂದ್ರಗಳು ಸೇರಿವೆ. ಫೆಬ್ರವರಿ 28 ರಿಂದ ಜರುಗಲಿರುವ ಪರೀಕ್ಷೆ-1ರಲ್ಲಿ ಒಟ್ಟು 14,801 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ 7,235 ಬಾಲಕಿಯರು ಮತ್ತು 5,143 ಬಾಲಕರು ಸೇರಿದ್ದಾರೆ. ಹೊಸದಾಗಿ 12,378, ಪುನರಾವರ್ತಿತರಾಗಿ 1,915, ಖಾಸಗಿಯಾಗಿ 500 ಹಾಗೂ ವಿಷಯಾಧಾರಿತ ಅಂಕಗಳನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮತ್ತೊಮ್ಮೆ 8 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು. 

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ 

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿ, ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಡಿಡಿಪಿಯು ನಾಗರಾಜ್ ಹವಾಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.