ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ವಹಿಸಿ : ಡಿಎಚ್‌ಓ ಸೂಚನೆ

ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ವಹಿಸಿ : ಡಿಎಚ್‌ಓ ಸೂಚನೆ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗಿ ಪ್ರಕರಣಗಳು, ಜ್ವರ ಪ್ರಕಣಗಳು ತೀವ್ರ ಗತಿಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಡೆಂಗಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಸಭೆ ಡಿಎಚ್ಓ ಕಚೇರಿ ಸಭಾಂಗಣದಲ್ಲಿ ಜರುಗಿತು. 

ಹೈರಿಸ್ಕ್ ಪ್ರದೇಶಗಳನ್ನು ಗುರುತಿಸಿ, ಡೆಂಗಿ ಮತ್ತು ಚಿಕೂನ್ ಗುನ್ಯಾ ರೋಗ ಹರಡದಂತೆ ನಿಯಮಿತವಾಗಿ ಲಾರ್ವಾ ಸಮೀಕ್ಷೆಯನ್ನು ನಡೆಸಲು, ಜಿಲ್ಲಾ ರೋಗವಾಹಕ ಆಶ್ರೀತರೋಗಗಳ ನಿಯಂತ್ರಣಾಧಿಕಾರಿಗಳಿಗೆ ಡಿಎಚ್ಓ ಸೂಚಿಸಿದರು. 

ಸಂಶಯಾಸ್ಪದ ಜ್ವರ ಪ್ರಕರಣಗಳನ್ನು ಗುರುತಿಸಿ, ರಕ್ತದ ಮಾದರಿಯನ್ನು ನಿಯಮಿತವಾಗಿ ಪ್ರಯೋಗಾಲಯಕ್ಕೆ ಕಳುಹಿಸುವುದು ಮತ್ತು ಪಾಸಿಟಿವ್ ಕಂಡು ಬಂದ ಪ್ರಕರಣಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ, ಗ್ರಾಮದಲ್ಲಿನ ಸಾರ್ವಜನಿಕರಿಗೆ, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗೆ, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಐ.ಇ.ಸಿ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಕರಪತ್ರ, ಭಿತ್ತಿಪತ್ರ ಹಾಗೂ ಬ್ಯಾನರ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗುವ ಜ್ವರಗಳ ಪ್ರಕರಣಗಳ ವರದಿಯನ್ನು ಸಂಗ್ರಹಿಸಿ, ವರದಿ ನೀಡಲು ಡಿಎಚ್ಓ ಅವರು ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶಿಸಿದರು.