ಬೆಂಗಳೂರು ಸಿಂಗಾಪುರಕ್ಕೆ ಅನೇಕ ವಿಷಯದಲ್ಲಿ ಸಾಮ್ಯತೆ ಇದೆ!
ಬೆಂಗಳೂರು: ಬೆಂಗಳೂರು ಮತ್ತು ಸಿಂಗಪುರ ನಡುವೆ ಅನೇಕ ವಿಷಯಗಳಲ್ಲಿ ಸಾಮ್ಯತೆ ಇದೆ. ಎರಡೂ ನಗರಗಳು ವಿಶ್ವದರ್ಜೆಯ ನಗರಗಳು. ಹೀಗಾಗಿ ಪರಸ್ಪರ ಸಹಭಾಗಿತ್ವದ ಸಮನ್ವಯಕ್ಕೆ ಒತ್ತು ನೀಡಲಾಗುವುದು ಎಂದು ಪಾಟೀಲ ಅವರು ಹೇಳಿದರು. 2020ರಿಂದ ಇಲ್ಲಿಯವರೆಗೆ ಸಿಂಗಪುರದ ಕಂಪನಿಗಳು ಭಾರತದಲ್ಲಿ 174.88 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಇದು ದೇಶಕ್ಕೆ ಹರಿದು ಬಂದಿರುವ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಶೇ.24ರಷ್ಟಿದೆ. ಆ ದೇಶದಲ್ಲಿ 9 ಸಾವಿರಕ್ಕೂ ಹೆಚ್ಚು ಭಾರತೀಯ ಕಂಪನಿಗಳಿದ್ದು, ಸಿಂಗಪುರದ 440 ಕಂಪನಿಗಳು ಭಾರತದಲ್ಲಿ ಸಕ್ರಿಯವಾಗಿವೆ ಎಂದು ಅವರು ನುಡಿದಿದ್ದಾರೆ.
ಬುಧವಾರ ತಮ್ಮನ್ನು ಖನಿಜ ಭವನದಲ್ಲಿ ಭೇಟಿಯಾದ ಸಿಂಗಪುರದ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆಗಳ ಸಹಾಯಕ ಸಚಿವೆ ಗಾನ್ ಸಿಯೋವೋ ಹುವಾಂಗ್ ಜೊತೆ ಬಂಡವಾಳ ಹೂಡಿಕೆ ಮತ್ತು ಸಹಭಾಗಿತ್ವ ಕುರಿತು ಅವರು ಮಾತುಕತೆ ನಡೆಸಿದರು.
ಆಸಿಯಾನ್ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ ಮಾಡುತ್ತಿರುವ ಸಿಂಗಪುರ ಜತೆ ಕೈಗಾರಿಕಾ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಒಳ್ಳೆಯ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರ ಪ್ರಥಮಾರ್ಧದಲ್ಲಿ ಆ ದೇಶಕ್ಕೆ ಭೇಟಿ ಕೊಡಲಾಗುವುದು. ಅದಕ್ಕೂ ಮುನ್ನ ದ್ವಿಪಕ್ಷೀಯ ಕೈಗಾರಿಕಾ ಬಾಂಧವ್ಯ ವರ್ಧನೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಚಾರ ವಿನಿಮಯ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
`ನಮ್ಮಿಂದ ಸಿಂಗಪುರದ ಕಂಪನಿಗಳಿಗೆ ಏನೇನಾಗಬೇಕು ಮತ್ತು ಆ ದೇಶದಲ್ಲಿರುವ ನಮ್ಮಲ್ಲಿನ ಕಂಪನಿಗಳಿಗೆ ಅಲ್ಲಿಯ ಸರ್ಕಾರದ ಮಟ್ಟದಲ್ಲಿ ಯಾವ ಕೆಲಸಗಳಾಗಬೇಕು? ಎನ್ನುವುದನ್ನು ಚರ್ಚಿಸಲಾಯಿತು. ವೈಮಾನಿಕ ಕ್ಷೇತ್ರದಲ್ಲಿ ಪ್ರಮುಖವಾಗಿರುವ ಎಂ.ಆರ್.ಒ. ವಲಯದಲ್ಲಿ ಸಿಂಗಪುರ ಹೆಸರುವಾಸಿಯಾಗಿದೆ. ಈ ಕ್ಷೇತ್ರದಲ್ಲಿ ರಾಜ್ಯಕ್ಕೆ ಸಹಾಯ ಮಾಡುವ ಭರವಸೆಯನ್ನು ಗಾನ್ ಅವರು ನೀಡಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದರು.