ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದನೆ- ಪ್ರತಿ ಟನ್‌ಗೆ 3,200 ರೂ. ನಿಗದಿ, ಸಿಎಂ ಘೋಷಣೆ

ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದನೆ- ಪ್ರತಿ ಟನ್‌ಗೆ 3,200 ರೂ. ನಿಗದಿ, ಸಿಎಂ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ 3,500 ರೂ. ಬೆಲೆಗೆ ಒತ್ತಾಯಿಸುತ್ತಿರುವ ನಡುವೆ, ಸಿಎಂ ಸಿದ್ಧರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ವಿವಿಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ, ಪ್ರತಿ ಟನ್ ಕಬ್ಬಿಗೆ 3,200 ರೂ. ನಿಗದಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. 

ಕಬ್ಬಿನ ರಿಕವರಿ ಪ್ರಮಾಣವನ್ನು ಆಧರಿಸಿ ಬೆಲೆ ನಿಗದಿಪಡಿಸಲಾಗುವುದು. 11.25% ರಿಕವರಿ ಇದ್ದಲ್ಲಿ ಪ್ರತಿ ಟನ್‌ಗೆ 3,500 ರೂ. ಹಾಗೂ 10.25% ರಿಕವರಿ ಇದ್ದಲ್ಲಿ 3,100 ರೂ. ನೀಡಲಾಗುವುದು. ಈ ನಿರ್ಧಾರವನ್ನು ಈಗಾಗಲೇ ರೈತರಿಗೆ ತಲುಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಸಿಎಂ ನಿಲುವು ಮತ್ತು ಸಚಿವರ ಸಭೆ 

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತಂತೆ ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಗಮನ ಹರಿಸಲಾಗಿದೆ. ಸಚಿವ ಹೆಚ್.ಕೆ. ಪಾಟೀಲ್ ಅವರಿಗೆ ರೈತರೊಂದಿಗೆ ಚರ್ಚಿಸುವಂತೆ ಸೂಚಿಸಲಾಗಿತ್ತು. ಅವರು ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. 

ನಿನ್ನೆ ಸಚಿವರಾದ ಹೆಚ್.ಕೆ. ಪಾಟೀಲ್ ಮತ್ತು ಎಂ.ಬಿ. ಪಾಟೀಲ್ ಅವರು ರೈತರೊಂದಿಗೆ ಮಾತನಾಡಿದ್ದು, ಸರ್ಕಾರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸಚಿವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆಗಳ ವಿಷಯದಲ್ಲೂ, ಸತೀಶ್ ಜಾರಕಿಹೊಳಿ ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ರೈತರೊಂದಿಗೆ ಮಾತನಾಡಲು ಕಳುಹಿಸಿದ್ದರು ಎಂದರು. 

ಕೇಂದ್ರ ಸರ್ಕಾರದ ಪಾತ್ರ ಮತ್ತು ಎಫ್‌ಆರ್‌ಪಿ 

ರೈತರು ಕೇಳುತ್ತಿರುವ ಎಫ್‌ಆರ್‌ಪಿ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ಈ ವರ್ಷ ಮೇ 6 ರಂದು ದರ ನಿಗದಿಪಡಿಸಲಾಗಿದೆ. 2025-26ನೇ ಸಾಲಿಗೆ, 10.25% ರಿಕವರಿ ಹೊಂದಿರುವ ಕಬ್ಬಿಗೆ ಪ್ರತಿ ಟನ್‌ಗೆ 3,550 ರೂ. ಎಫ್‌ಆರ್‌ಪಿ ದರವನ್ನು ನಿಗದಿಪಡಿಸಲಾಗಿದೆ. ಇದು ಸಾರಿಗೆ ವೆಚ್ಚವನ್ನು ಒಳಗೊಂಡಿದೆ. 

ಕೇಂದ್ರ ಸರ್ಕಾರ ಸಕ್ಕರೆ ಬೆಲೆಯ ನಿಯಂತ್ರಣವನ್ನೂ ಮಾಡುತ್ತದೆ. 2017-18ರಲ್ಲಿ 17% ಇದ್ದ ರಿಕವರಿ ಪ್ರಮಾಣವನ್ನು 2022-23ಕ್ಕೆ 10.05%ಕ್ಕೆ ಇಳಿಸಲಾಗಿತ್ತು. ಈಗ 10.25% ರಿಕವರಿ ಪ್ರಮಾಣ ನಿಗದಿಪಡಿಸಲಾಗಿದೆ. 2019ರಲ್ಲಿ ಸಕ್ಕರೆಯ ಕನಿಷ್ಠ ಬೆಲೆಯನ್ನು (MSP) 35 ರೂ.ಗೆ ನಿಗದಿಪಡಿಸಲಾಗಿದ್ದು, ಅಂದಿನಿಂದ ಕೇಂದ್ರ ಸರ್ಕಾರ ಇದನ್ನು ಬದಲಾಯಿಸಿಲ್ಲ ಎಂದು ಅವರು ವಿವರಿಸಿದರು. 

ಸಕ್ಕರೆ ರಫ್ತು ನಿರ್ಬಂಧ ಮತ್ತು ರಾಜಕೀಯ ಆರೋಪ 

ಸಕ್ಕರೆ ರಫ್ತನ್ನು ನಿಲ್ಲಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಕರ್ನಾಟಕವೊಂದರಲ್ಲೇ 41 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ. ರೈತರ ಮುಗ್ಧತೆಯನ್ನು ಬಳಸಿಕೊಂಡು, ತಪ್ಪು ಮಾಹಿತಿ ನೀಡಿ, ಕೇಂದ್ರ ಸರ್ಕಾರದ ಜವಾಬ್ದಾರಿಯಿದ್ದರೂ ವಿರೋಧ ಪಕ್ಷದವರು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಸಿಎಂ ಆರೋಪಿಸಿದರು. 

ಮುಂದಿನ ಕ್ರಮಗಳು ಮತ್ತು ಪ್ರಧಾನಿಗೆ ಪತ್ರ 

ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಸಭೆಯಲ್ಲಿ ರೈತರ ಪ್ರತಿಭಟನೆ ಮತ್ತು ಎಫ್‌ಆರ್‌ಪಿ ದರಗಳ ಬಗ್ಗೆ ಚರ್ಚಿಸಲಾಗುವುದು. ಇದೇ ದಿನ ಮಧ್ಯಾಹ್ನ 1 ಗಂಟೆಗೆ ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ರೈತ ಮುಖಂಡರ ಸಭೆಯನ್ನೂ ಕರೆಯಲಾಗಿದೆ. 

ಜೊತೆಗೆ, ನಾಳೆಯೇ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುತ್ತಿದ್ದು, ಪ್ರಧಾನಿ ಸಮಯ ನೀಡಿದರೆ ತಕ್ಷಣ ದೆಹಲಿಗೆ ತೆರಳಿ, ರೈತರ ಪ್ರತಿಭಟನೆ ಮತ್ತು ಬೇಡಿಕೆಗಳ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಿದ್ಧರಾಮಯ್ಯ ತಿಳಿಸಿದರು.